ತಾಮ್ಸನ್, ಜೋಸೆಫ್ ಜಾನ್
	1856-1940. ಇಂಗ್ಲಿಷ್ ಭೌತವಿಜ್ಞಾನಿ. ಎಲೆಕ್ಟ್ರಾನನ್ನು ಆವಿಷ್ಕರಿಸಿದಾತ. 1856ರ ಡಿಸೆಂಬರ್ 18ರಂದು ಮ್ಯಾಂಚೆಸ್ಟರಿನ ಚೀತಮ್‍ಹಿಲ್‍ನಲ್ಲಿ ಜನಿಸಿದ. ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ 14ನೆಯ ವಯಸ್ಸಿನಲ್ಲಿ ಮ್ಯಾಂಚೆಸ್ಟರಿನ ಒವನ್ಸ್ ಕಾಲೇಜಿನಲ್ಲಿ ಸ್ನಾತಕ ವಿದ್ಯಾಭ್ಯಾಸವನ್ನು ಮುಂದುವರಿಸಿದ. 1876ರಲ್ಲಿ ಕೇಂಬ್ರಿಜಿನ ಟ್ರಿನಿಟಿ ಕಾಲೇಜಿನಲ್ಲಿ ಮೈನರ್ ಸ್ಕಾಲರ್ ಆಗಿ ಸೇರಿ 1880ರಲ್ಲಿ ಆ ಕಾಲೇಜಿನ ಫೆಲೋ ಆದ. ಜೀವಿತಾವಧಿಯ ಬಹುಕಾಲ ಟ್ರಿನಿಟಿ ಕಾಲೇಜಿನ ಸದಸ್ಯನಾಗಿದ್ದು 1883ರಲ್ಲಿ ಉಪನ್ಯಾಸಕನಾಗಿ ಮತ್ತು 1918ರಲ್ಲಿ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ. 1884ರಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಚುನಾಯಿತನಾದ. ಲಾರ್ಡ್ ರ್ಯಾಲೆ ಕೇಂಬ್ರಿಜಿನ ಕ್ಯಾವೆಂಡಿಷ್ ಭೌತಶಾಸ್ತ್ರ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಆ ಹುದ್ದೆಗೆ ತಾಮ್ಸನ್ ನೇಮಕಗೊಂಡು 1884 ರಿಂದ 1918ರವರೆಗೆ ಸೇವೆ ಸಲ್ಲಿಸಿದ. ಆ ವೇಳೆಯಲ್ಲಿ ಈತ ಲಂಡನ್ನಿನ ರಾಯಲ್ ಹಾಗೂ ಕೇಂಬ್ರಿಜ್ ಸಂಸ್ಥೆಗಳ ಗೌರವ ಪ್ರಾಧ್ಯಾಪಕನೂ ಆಗಿದ್ದ.

	ತಾಮ್ಸನ್ (ಜೆಜೆ ಎಂದೇ ಇವನನ್ನು ಕರೆಯುವುದಿತ್ತು) ತನ್ನ ಬದುಕಿನ ಬಹು ಭಾಗವನ್ನು ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಸಿ ಗಮನಾರ್ಹವಾದ ಕೊಡುಗೆಗಳನ್ನಿತ್ತ. ಪರಮಾಣುವಿನ ರಚನೆಯ ಬಗ್ಗೆ ಅಧ್ಯಯನವನ್ನು 1883ರಲ್ಲಿ ಪ್ರಾರಂಭಿಸಿದ, 1884ರಲ್ಲಿ ವೋರ್ಟೆಕ್ಸ್ ರಿಂಗ್ಸ್ ಸಂಬಂಧವಾದ ಪ್ರಬಂಧವನ್ನು ಪ್ರಕಟಿಸಿದ. ಇದಕ್ಕೆ ಆತನಿಗೆ ಆ್ಯಡಮ್ ಬಹುಮಾನ ದೊರೆಯಿತು. 1892ರಲ್ಲಿ ಈತ ಪ್ರಕಟಿಸಿದ ವಿದ್ಯುಚ್ಛಕ್ತಿ ಮತ್ತು ಕಾಂತ ಪ್ರಕರಣದ ಸಂಶೋಧನ ಪ್ರಬಂಧ ಪುಸ್ತಕ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‍ವೆಲನ ಪ್ರಬಂಧದಲ್ಲಿ ಕಂಡುಬಂದ ಕೆಲವು ಫಲಿತಾಂಶಗಳನ್ನು ಒಳಗೊಂಡಿತ್ತು. ಆದ್ದರಿಂದ ತಾಮ್ಸನ್‍ನ ಈ ಪುಸ್ತಕವನ್ನು ಅನೇಕ ವೇಳೆ ಮ್ಯಾಕ್ಸ್‍ವೆಲನ ಮೂರನೆಯ ಸಂಪುಟ ಎನ್ನುವುದುಂಟು. ಜಾನ್ ಎಚ್. ಪಾಯಿಂಟ್ ನೋಡಗೂಡಿ ಈತ ನಾಲ್ಕು ಸಂಪುಟಗಳಲ್ಲಿ ಭೌತ ಶಾಸ್ತ್ರದ ಪಠ್ಯಪುಸ್ತಕ ಪ್ರಾಪರ್ಟಿಸ್ ಆಫ್ ಮ್ಯಾಟರ್ ಎಂಬುದನ್ನು ಪ್ರಕಟಿಸಿದ. ಈತನ ಎಲಿಮೆಂಟ್ಸ್ ಆಫ್ ಮಾಥ್ ಮ್ಯಾಟಿಕಲ್ ಥಿಯರಿ ಆಫ್ ಎಲೆಕ್ಟ್ರಿಸಿಟಿ ಅಂಡ್ ಮ್ಯಾಗ್ನೆಟಿಸಮ್ ಅತ್ಯುತ್ತಮವಾದ ಪುಸ್ತಕವೆನಿಸಿ 1921ರಲ್ಲಿ ಇದು ಐದನೆಯ ಮುದ್ರಣವನ್ನು ಕಂಡಿತು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಿಗೆ ಬಲವಿಜ್ಞಾನವನ್ನು ಅಳವಡಿಸುವ ವಿವರಗಳನ್ನು 1886ರಲ್ಲಿ ನೀಡಿದ.

	1896ರಲ್ಲಿ ತಾಮ್ಸನ್‍ನು ಅಮೆರಿಕಕ್ಕೆ ಭೇಟಿ ಕೊಟ್ಟು ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಲ್ಲಿ ನಾಲ್ಕು ಉಪನ್ಯಾಸಗಳನ್ನು ನೀಡಿದ. ಈ ಸರಣಿಯಲ್ಲಿ ಆತ ಅನಿಲಗಳ ಮೂಲಕ ವಿದ್ಯುದ್ವಿಸರ್ಜನೆ ಬಗೆಗಿನ ಸಂಶೋಧನೆಗಳನ್ನು ವಿವರಿಸಿದ. ಮುಂದೆ 1897ರಲ್ಲಿ ಇವನ್ನು ಕ್ರೋಡೀಕರಿಸಿ ಅನಿಲಗಳಲ್ಲಿ ವಿದ್ಯುದ್ವಿಸರ್ಜನೆ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಎಕ್ಸ್-ಕಿರಣಗಳು ಅನಿಲದ ಮೂಲಕ ಹಾದಾಗ ಉತ್ಪತ್ತಿಯಾಗುವ ಅನಿಲದ ಅಯಾನುಗಳ ವಿದ್ಯುದಾವೇಶ ಮೂಲ ಏಕ ವಿದ್ಯುದಾವೇಶ ಪಡೆದಿರುತ್ತದೆ ಎಂದು ಈತ 1898ರಲ್ಲಿ ಸ್ಥಿರಪಡಿಸಿದ. ಅನಿಲವನ್ನು ವಿಕಿರಣಗಳಿಂದ ಅಯಾನೀಕರಿಸಿ ಅಯಾನಿನ ಸರಾಸರಿ ವಿದ್ಯುದಾವೇಶವನ್ನು ಅಳೆದು ಅದು ಪುನಃ ಮೂಲ ವಿದ್ಯುದಾವೇಶಕ್ಕೆ ಸಮವಾಗಿರುತ್ತದೆ ಎಂದು ತೋರಿಸಿದ (1903) . ಕ್ಯಾಥೋಡ್ ಕಿರಣಗಳು ಕಾಂತ ಮತ್ತು ವಿದ್ಯುತ್ ಕ್ಷೇತ್ರಗಳಿಂದ ಪ್ರಭಾವಿತವಾಗುತ್ತವೆ ಎಂದು ತೋರಿಸಿ ಅವು ಋಣವಿದ್ಯುದಾವಿಷ್ಟ ಕಣಗಳ ಪ್ರವಾಹ ಎಂದು 1897ರಲ್ಲಿ ಸೂಚಿಸಿದ. ಕ್ಯಾಥೋಡ್ ಕಿರಣಗಳ ಬಗ್ಗೆ ಮೂಲಭೂತವಾದ ಅಧ್ಯಯನ ಅದಾಗಿತ್ತು. ಕಿರಣಗಳ ಕಣದ ಸಾಪೇಕ್ಷ ವಿದ್ಯುದಾವೇಶ e/m ನ್ನು e= ಕಣದ ವಿದ್ಯುದಾವೇಶ, m=ಕಣದ ರಾಶಿ) ಅಳೆದು ಅದರ ಬೆಲೆ ನೀರಿನ ವಿದ್ಯುದ್ವಿಭಜನೆಯಲ್ಲಿ ಕಂಡುಬರುವ ಅಯಾನುಗಳಿಗಿಂತ ಒಂದು ಸಾವಿರ ಪಟ್ಟು ಹೆಚ್ಚಾಗಿರುತ್ತದೆ ಎಂಬುದನ್ನು ತೋರಿಸಿದ. ಈತನೇ ನಿಯೋಜಿಸಿದ ಉಪಕರಣದಲ್ಲಿ ಪ್ರಯೋಗ ನಡೆಸಿ ಕ್ಯಾಥೋಡ್ ಕಿರಣಗಳಲ್ಲಿರುವ ಕಣಗಳ ವೇಗ (3(109 ಸೆಂ.ಮೀ./ಸೆಕೆಂಡ್) ಮತ್ತು ಸಾಪೇಕ್ಷ ವಿದ್ಯುದಾವೇಶಗಳನ್ನು (e/m=2(107 esu/gಡಿಚಿm) ಅಳೆದ. ಅಲ್ಯೂಮಿನಿಯಮ್, ಕಬ್ಬಿಣ, ಪ್ಲಾಟಿನಮ್ ಮುಂತಾದ ಬೇರೆ ಬೇರೆ ವಸ್ತುಗಳನ್ನು ಕ್ಯಾಥೋಡ್ ಆಗಿ ಉಪಯೋಗಿಸಿ ವಾಯು, ಜಲಜನಕ, ಇಂಗಾಲದ ಡೈಆಕ್ಸೈಡ್ ಮುಂತಾದ ಅನಿಲಗಳನ್ನು ವಿಸರ್ಜನ ನಳಿಕೆಯಲ್ಲಿ ಬಳಸಿ ಪಡೆದ ಕ್ಯಾಥೋಡ್ ಕಿರಣಗಳಲ್ಲಿನ ಕಣಗಳು ಒಂದೇ ತೆರನಾಗಿರುವುವು ಎಂಬುದನ್ನು ಸೂಚಿಸಿದ. ದ್ಯುತಿ ವೈದ್ಯುತ ಪರಿಣಾಮದಿಂದ ಬರುವ ಕಣಗಳ e/m ನ್ನು ಅಳೆದಾಗ (1899) ಅದರ ಬೆಲೆ ಕ್ಯಾಥೋಡ್ ಕಿರಣ ಕಣಗಳ ಬೆಲೆಯಷ್ಟೇ ಇದ್ದುದು ಕಂಡುಬಂದುದರಿಂದ, ಈ ಎಲ್ಲ ಕ್ರಿಯೆಗಳಲ್ಲಿಯೂ ಒಂದೇ ತೆರನಾದ ಕಣಗಳು ಪಾತ್ರ ವಹಿಸುತ್ತವೆ ಎಂದು ಸೂಚಿಸಿದ. ಈ ಸಣ್ಣ ಕಣದ ಅನ್ವೇಷಣೆಯನ್ನು 1897ರ ಏಪ್ರಿಲ್ 30ರಂದು ರಾಯಲ್ ಸೊಸೈಟಿಯ ಶುಕ್ರವಾರದ ಸಂಜೆ ಉಪನ್ಯಾಸದಲ್ಲಿ ಪ್ರಕಟಿಸಿದ. ಇವನ್ನು 20ವರ್ಷಗಳ ಕಾಲ ಕಣಗಳೆಂದೇ ಕರೆಯುತ್ತಿದ್ದು, ಜೆ, ಸ್ಟೋನಿ ಎಂಬಾತ ಸೂಚಿಸಿದ ಎಲೆಕ್ಟ್ರಾನ್ ಎಂಬ ಪದ ಅನಂತರ ರೂಢಿಗೆ ಬಂದಿತು.

 	ವಿದ್ಯುದಾವೇಶವಿರುವ ಕಣಗಳ ತ್ರಿಜ್ಯಕ್ಕೆ ತಾಮ್ಸನ್ ಸೈದ್ಧಾಂತಿಕವಾಗಿ ಒಂದು ಸೂತ್ರವನ್ನು ಪಡೆದ (1891). ಆದರಿಂದ ಎಲೆಕ್ಟ್ರಾನಿನ ತ್ರಿಜ್ಯ 2.82x1013 ಸೆಂಮೀ ಎಂದು ಲೆಕ್ಕಾಚಾರ ಹಾಕಿದ. ಎಲೆಕ್ಟ್ರಾನಿನ ಅನ್ವೇಷಣೆಯ ಅನಂತರ ಇ. ಗೋಲ್ಡ್ ಸ್ಟೀನ್ ಕ್ಯಾಥೋಡ್ ಕಿರಣಗಳಂತೆಯೇ ಧನವಿದ್ಯುದಾವೇಶ ಕಣಗಳನ್ನು ಹೊಂದಿರುವ ಕಿರಣಗಳ ಗುಣಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು ಅವನ್ನು ಕೆನಾಲ್ ರೇಸ್ ಎಂದು ಕರೆದ. ತಾಮ್ಸನ್ 1907ರಲ್ಲಿ ಅವುಗಳಿಗೆ ಪಾಸಿಟಿವ್ ರೇಸ್ (ಧನಾತ್ಮಕ ಕಿರಣಗಳು) ಎಂಬ ಹೆಸರನ್ನು ಸಲ್ಲಿಸಿದ. ಈ ಪದ ಅನಂತರ ಬಳಕೆಗೆ ಬಂದಿತು. 

	ತಾಮ್ಸನ್ ಪುನಃ 1904ರಲ್ಲಿ ಅಮೆರಿಕಕ್ಕೆ ತೆರಳಿ ವಿದ್ಯುಚ್ಛಕ್ತಿ ಮತ್ತು ವಸ್ತುಗಳ ಈ ಬಗ್ಗೆ ಯೇಲ್ ವಿಶ್ವವಿದ್ಯಾಲಯದಲ್ಲಿ ಆರು ಉಪನ್ಯಾಸಗಳನ್ನು ನೀಡಿದ. ಈ ಮಾಲೆಯಲ್ಲಿ ಆತ ಪರಮಾಣು ರಚನೆಯ ಬಗ್ಗೆ ಹಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದ. ಅವನ ಮಾತಿನಲ್ಲೇ ಹೇಳುವುದಾದರೆ 'ಪರಮಾಣುವಿನಲ್ಲಿ ಹಲವಾರು ಧನಕಣಗಳು ಉಂಟು, ಇವು ಧನ ವಿದ್ಯುತ್ ಪೂರಿತ ಗೋಳದೊಳಗೆ ಚಲಿಸುತ್ತಿದ್ದು ಋಣವಿದ್ಯುತ್ ಕಣಗಳು ಏಕಕೇಂದ್ರಕ ಚಿಪ್ಪುಗಳಲ್ಲಿ ವ್ಯವಸ್ಥೆಗೊಂಡಿರುತ್ತವೆ. ಧಾತುಗಳ ರಾಸಾಯನಿಕ ಗುಣ ಚಿಪ್ಪುಗಳಲ್ಲಿರುವ ಕಣಗಳ ಮೇಲೆ ಅವಲಂಬಿತವಾಗಿದೆ. ಸ್ವತಃ ತಾಮ್ಸನ್‍ನಿಗೆ ಈ ಹೇಳಿಕೆಯ ಬಗ್ಗೆ ತೃಪ್ತಿ ಇರಲಿಲ್ಲ. ಆದರೆ ಈ ಊಹೆ ಪ್ರಾಮುಖ್ಯವನ್ನು ಪಡೆದದ್ದು ಪರಮಾಣುವಿನಲ್ಲಿ ಎಲೆಕ್ಟ್ರಾನ್ ಇದೆಯೆಂದೂ ಧನಾತ್ಮಕ ಋಣಾತ್ಮಕ ವಿದ್ಯುದಾವೇಶಗಳ ಮಿಲನವಿದೆಯೆಂದೂ ಸೂಚಿಸಿದುದರಿಂದ. ಅನಂತರ 1912ರಲ್ಲಿ ರುದರ್‍ಫರ್ಡ್ (ತಾಮ್ಸನ್ನನ ಶಿಷ್ಯ) ಧನ ವಿದ್ಯುದಾವೇಶ, ಪರಮಾಣುವಿನ ಮಧ್ಯದಲ್ಲಿ ಕೇಂದ್ರೀಕೃತವಾಗಿರುತ್ತದೆಂದು ಊಹಿಸಿ, ಆ ಆವರಣವನ್ನು ನ್ಯೂಕ್ಲಿಯಸ್ ಎಂದು ಕರೆದ. ಎಲೆಕ್ಟ್ರಾನುಗಳು ನ್ಯೂಕ್ಲಿಯಸಿನಿಂದ ಹೊರಗಡೆ ಇದ್ದು ಬೇರೆ ಬೇರೆ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿರುತ್ತವೆ, ಹಾಗೂ ಹೊರ ಕಕ್ಷೆಯಲ್ಲಿರುವ ಎಲೆಕ್ಟ್ರಾನುಗಳು ವಸ್ತುಗಳ ರಾಸಾಯನಿಕ ಗುಣ ಮತ್ತು ರೋಹಿತಗಳನ್ನು ನಿರ್ಧರಿಸುತ್ತವೆ ಎಂದು ರುದರ್‍ಫರ್ಡ್, ಬೋರ್ ಹಾಗೂ ತಾಮ್ಸನ್ ಸೂಚಿಸದರು (1913,1914). ತಾಮ್ಸನ್ನನ ಧನ ವಿದ್ಯುತ್ ಕಿರಣಗಳ ಸಂಬಂಧವಾದ ಪ್ರಯೋಗ ತಾಮ್ಸನ್ ಪರವಲಯ ವಿಧಾನ ಎನಿಸಿತು. ಈ ಪ್ರಯೋಗದಲ್ಲಿ ನಿಯಾನನ್ನು ಉಪಯೋಗಿಸಿ ಛಾಯಾಚಿತ್ರಗಳನ್ನು ಪಡೆದ. ಇದರಲ್ಲಿ ಎರಡು ಪರವಲಯಗಳಿರುವುದು ಕಂಡುಬಂದಿತು. ಅನಂತರ ತಾಮ್ಸನ್ನನ ಸಹಾಯಕನಾದ ಆಸ್ಟನ್ ನಿಯಾನಿನ ಘಟಕಗಳನ್ನು ಬೇರ್ಪಡಿಸಿ ಪರಮಾಣು ತೂಕ 20 ಮತ್ತು 22 ಇರುವ ಎರಡು ಐಸೊಟೋಪುಗಳ ಇರುವಿಕೆಯಿಂದ ಅನುಗುಣವಾದ ಎರಡು ಪರವಲಯಗಳು ಉಂಟಾಗುತ್ತವೆಂದು ವಿವರಿಸಿದ. ತಾಮ್ಸನ್ನನ ಇನ್ನೊಂದು ಅತ್ಯತ್ತಮ ಪುಸ್ತಕ ಕಂಡಕ್ಷನ್ ಆಫ್ ಎಲೆಕ್ಟ್ರಸಿಟಿ ತ್ರೂ ಗ್ಯಾಸಸ್ 1903ರಲ್ಲಿ ಪ್ರಕಟವಾಯಿತು. ಲಾರ್ಡ್ ರ್ಯಾಲೆ ಇದನ್ನು ತಾಮ್ಸನ್ ಕ್ಯಾವೆಂಡಿಷ್ ಭೌತ ಪ್ರಯೋಗ ಶಾಲೆಯಲ್ಲಿ ಕಳೆದ ಮಹತ್ತ್ವದ ದಿನಗಳ ಸಾರಾಂಶವೆಂದು ಪ್ರಶಂಸಿಸಿದ. 1928ಮತ್ತು 1933ರಲ್ಲಿ ಅದೇ ಪುಸ್ತಕವನ್ನು ತಾಮ್ಸನ್ ತನ್ನ ಮಗ ಜಿ. ಪಿ. ತಾಮ್ಸನ್ ನೊಂದಿಗೆ ಎರಡು ಸಂಪುಟಗಳಲ್ಲಿ ಪ್ರಕಟಿಸಿದ. ಜೆಜೆಯ ಇತರ ಪ್ರಕಟಣೆಗಳಲ್ಲಿ ದಿ ಸ್ಟ್ರಕ್ಚರ್ ಆಫ್ ಲೈಟ್ ಮತ್ತು ಕಾರ್ಪಸ್‍ಕ್ಯೂಲರ್ ಥಿಯೊರಿ ಆಫ್ ಮ್ಯಾಟರ್ (1907), ರೇಸ್ ಆಫ್ ಪಾಸಿಟಿವ್ ಎಲೆಕ್ಟ್ರಿಸಿಟಿ (1913) ಹಾಗೂ ಎಲೆಕ್ಟ್ರಾನ್ ಇನ್ ಕೆಮಿಸ್ಟ್ರಿ (1923) ಎಂಬವು ಮುಖ್ಯವಾದವು. ಜೆ.ಜೆ.ತಾಮ್ಸನ್ ಆತ್ಮಚರಿತ್ರೆ 1936ರಲ್ಲಿ ಪ್ರಕಟವಾಯಿತು. 

	ಅನಿಲಗಳಿಂದ ವಿದ್ಯುಚ್ಛಕ್ತಿಯ ವಹನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಸಂಶೋಧನೆಗಳ ಪ್ರೌಢಿಮೆಗಾಗಿ ತಾಮ್ಸನ್ನನಿಗೆ 1906ರಲ್ಲಿ ಭೌತಶಾಸ್ತ್ರದ ನೊಬೆಲ್ ಪಾರಿತೋಷಿಕ ದೊರೆಯಿತು. 1894ರಲ್ಲಿ ರಾಯಲ್ ಮೆಡಲನ್ನೂ 1902ರಲ್ಲಿ ಹಗ್ಸ್ ಮೆಡಲನ್ನೂ 1914ರಲ್ಲಿ ಕೋಪ್ಲೆ ಮೆಡಲನ್ನೂ ಇವನು ಪಡೆದ. ಉಚ್ಚ ಮಟ್ಟದ ವೈಜ್ಞಾನಿಕ ಸಂಶೋಧನೆಗಳಿಗಾಗಿ ಇನ್ನೂ ಅನೇಕ ಸಂಘ ಸಂಸ್ಥೆಗಳು ಈತನಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಿದುವು. ವಾಷಿಂಗ್ಟನ್ನಿನ ಸ್ಮಿತ್ ಸೋನಿಯನ್ ಸಂಸ್ಥೆಯ ಹಾಡ್‍ಕಿನ್ಸ್ ಮೆಡಲ್ (1902), ಫಿಲಡೆಲ್ಫಿಯಾದ ಫ್ರಾಂಕ್ಲಿನ್ ಮತ್ತು ಸ್ಕಾಟ್ ಮೆಡಲ್ (1923), ಪ್ಯಾರಿಸ್ಸಿನ ಮ್ಯಾಸ್ ಕಾರ್ಟ್ ಮೆಡಲ್ (1927), ಮ್ಯಾಂಚೆಸ್ಟರಿನ ಡಾಲ್ಟನ್ ಮೆಡಲ್ (1931), ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರ್ಸನ ಫ್ಯಾರಡೇ ಮೆಡಲ್ (1938) ಇವು ತಾಮ್ಸನ್ ಪಡೆದ ಮೆಡಲುಗಳಲ್ಲಿ ಮುಖ್ಯವಾದವು. 

	1940ರ ಆಗಸ್ಟ್ 30ರಂದು ಕೇಂಬ್ರಿಜ್‍ನಲ್ಲಿ ತಾಮ್ಸನ್ ನಿಧನಹೊಂದಿದ. ಅವನ ಕಳೆಬರವನ್ನು ವೆಸ್ಟ್ ಮಿನ್‍ಸ್ಟರ್ ಅಬ್ಬೆಯಲ್ಲಿ ನ್ಯೂಟನ್ನನ ಸಮಾಧಿ ಪಕ್ಕದಲ್ಲಿ ಹೂಳಲಾಯಿತು.
(ಸಿ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ